Tuesday, 23 January 2018

ದಿನಕ್ಕೊಂದು ಕಥೆ

  *ನಾನೊಂದು ಚುಕ್ಕೆ! ನೀನೊಂದು ಚುಕ್ಕೆ......*

ನಮ್ಮನ್ನು ಚುಕ್ಕೆ ಎಂದು ಕರೆಯುವ ಧೈರ್ಯ ಯಾರಿಗಿದೆ? ಆದರೆ ನೀವೊಂದು ಚುಕ್ಕೆಯೊಳಗಿನ ಚುಕ್ಕೆ ಎಂದು ಧೈರ್ಯವಾಗಿ ಹೇಳಿದ ನಿಜಜೀವನದ ಘಟನೆಯೊಂದು ಇಲ್ಲಿದೆ. ಒಂದು ಮಧ್ಯಾಹ್ನ ಸಾಕ್ರೆ ಟಿಸರು(469-399ಆಇ) ತಮ್ಮ ಶಿಷ್ಯರೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ಆಗ ಶ್ರೀಮಂತರೊಬ್ಬರು ಅಲ್ಲಿಗೆ ಬಂದರು. ಸಾಕ್ರೆಟಿಸರು ಅವರನ್ನು ಗಮನಿಸಲಿಲ್ಲ. ಶ್ರೀಮಂತರು ಸಾಕ್ರೆಟಿಸರನ್ನು ‘ನಾನು ಯಾರೆಂದು ನಿಮಗೆ ಗೊತ್ತಿಲ್ಲವೇ? ನಾನು ಅಥ್ಸ್‌ ನಗರದಲ್ಲಿ ಅತ್ಯಂತ ಶ್ರೀಮಂತ.

ಅರಮನೆಯಂಥ ಮನೆ, ನೂರಾರು ಎಕರೆ ಜಮೀನು, ಆಸ್ತಿಪಾಸ್ತಿ ಹೊಂದಿದ್ದೇನೆ. ನೀವು ನನ್ನನ್ನು ಗುರುತಿಸಲಿಲ್ಲವೇ?’ ಎಂದು ಅಬ್ಬರಿಸಿದರು. ಸಾಕ್ರೆಟಿಸರು ನಸುನಗುತ್ತಲೇ ‘ಕ್ಷಮಿಸಿ. ನಾನು ತಮ್ಮ ಅರಮನೆಯಂಥ ಮನೆಯನ್ನೂ, ನೂರಾರು ಎಕರೆ ಜಮೀನನ್ನೂ ನೋಡಿಲ್ಲ. ತಾವು ಅವುಗಳನ್ನು ತೋರಿಸುವ ಕೃಪೆ ಮಾಡಿದರೆ ನಾನು ಕೃತಾರ್ಥನಾಗತ್ತೇನೆ’ ಎಂದರು. ಶ್ರೀಮಂತರು ‘ನೀವು ನನ್ನೊಂದಿಗೆ ಬರುವಿರಾದರೆ ಅದನ್ನೆಲ್ಲ ತೋರಿಸುತ್ತೇನೆ’ ಎಂದರು. ಸಾಕ್ರೆಟಿಸರು ‘ನಿಮ್ಮೊಂದಿಗೆ ಬರಲು ನನಗೆ ಸಾಧ್ಯವಿಲ್ಲ.

ನನ್ನ ಬಳಿ ಭೂಪಟವಿದೆ. ಅದರಲ್ಲಿ ನಿಮ್ಮ ಮನೆಯನ್ನೂ, ಜಮೀನನ್ನೂ ತೋರಿಸಿದರೆ ನನಗೆ ಉಪಯೋಗವಾಗಬಹುದು’ ಎಂದು ಹೇಳಿ ಭೂಪಟವನ್ನು ತೆಗೆದು ಹರಡಿ ‘ಶ್ರೀಮಂತರೇ ಇದು ನಮ್ಮ ದೇಶದ ಭೂಪಟ. ಇದರಲ್ಲಿ ಅಥ್ಸ್‌ ನಗರವನ್ನು ತೋರಿಸಿ’ ಎಂದು ಕೇಳಿದರು. ಶ್ರೀಮಂತರು ಭೂಪಟ ನೋಡಿದರು, ಕೊಂಚ ಹುಡುಕಿದರು. ಆನಂತರ ‘ಇಗೋ ನೋಡಿ. ಈ ಚುಕ್ಕೆಯೇ ಅಥ್ಸ್‌ ನಗರ’ ಎಂದರು. ಸಾಕ್ರೆಟಿಸರು ‘ಅಥ್ಸ್‌ ನಗರ ತೋರಿಸಿದಿರಿ. ಒಳ್ಳೆಯದಾಯಿತು. ಈಗ ನಿಮ್ಮ ಅರಮನೆಯನ್ನೂ, ನೂರಾರು ಎಕರೆ ಜಮೀನನ್ನೂ ತೋರಿಸಿ’ ಎಂದು ಕೇಳಿದರು. ಶ್ರೀಮಂತರು ಗಟ್ಟಿಯಾಗಿ ನಕ್ಕು ‘ಭೂಪಟದಲ್ಲಿ ಅಥ್ಸ್‌ ನಗರವೇ ಒಂದು ಚುಕ್ಕೆಯಾಗಿ ತೋರಿಸಲ್ಪಟ್ಟಿದೆ. ಆ ಚಿಕ್ಕ ಚುಕ್ಕೆಯಲ್ಲಿ ನನ್ನ ಅರಮನೆಯನ್ನೂ, ಜಮೀನನ್ನೂ ಹೇಗೆ ತೋರಿಸಲು ಸಾಧ್ಯ?’ ಎಂದು ಕೇಳಿದರು.

ಸಾಕ್ರೆಟಿಸರೂ ಮತ್ತೂ ಗಟ್ಟಿಯಾಗಿ ನಕ್ಕು ‘ಶ್ರೀಮಂತರೇ, ನಿಮ್ಮ ಕೈಯಲ್ಲಿರುವುದು ಈ ದೇಶದ ಭೂಪಟ. ಪ್ರಪಂಚದ ಭೂಪಟ ತೆಗೆದುಕೊಂಡರೆ ಅಲ್ಲಿ ನಮ್ಮ ದೇಶವೂ ಒಂದು ಚುಕ್ಕೆಯಂತೆ ಕಾಣಬಹುದು. ಇಡೀ ಜಗತ್ತಿನ ಭೂಪಟವನ್ನು ತೆಗೆದುಕೊಂಡರೆ ಅಲ್ಲಿ ನಮ್ಮ ಪ್ರಪಂಚವೂ ಒಂದು ಚುಕ್ಕೆಯಂತೆ ಕಾಣಬಹುದು. ಅದರಲ್ಲಿ ಎಷ್ಟು ಸೂರ್ಯಲೋಕಗಳೋ, ಎಷ್ಟು ಚಂದ್ರಲೋಕಗಳೋ, ಎಷ್ಟು ಭೂಲೋಕಗಳೋ ಯಾರಿಗೆ ಗೊತ್ತು? ಅವನ್ನೆಲ್ಲ ನೋಡುವ ನನಗೆ ನಿಮ್ಮ ಅರಮನೆ-ಜಮೀನು, ನೀವೂ ಕಾಣಿಸಲಿಲ್ಲ. ನಿಮಗೆ ಅವಮಾನ ಮಾಡಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ತಪ್ಪನ್ನು ಕ್ಷಮಿಸುತ್ತೀರಾ?’ ಎಂದಾಗ, ಶ್ರೀಮಂತರಿಗೆ ಸಾಕ್ರೆಟಿಸ್ ಎಷ್ಟು ದೊಡ್ಡವರು, ತಾವೆಷ್ಟು ಸಣ್ಣವರು ಎಂಬುದರ ಅರಿವಾಯಿತು.

ಅವರು ಮೆಲುದನಿಯಲ್ಲಿ ‘ಸಾಕ್ರೆಟಿಸರೇ, ನನ್ನ ಸಿರಿವಂತಿಕೆಯ ಬಗ್ಗೆ ನಾನೇ ಬೆಳೆಸಿಕೊಂಡಿದ್ದ ದುರಭಿಮಾನದಿಂದ ಹೀಗೆಲ್ಲ ಮಾತನಾಡಿದೆ. ನನ್ನನ್ನು ಕ್ಷಮಿಸಿಬಿಡಿ. ನನಗೂ ಏನಾದರೂ ಉಪದೇಶ ಕೊಡಿ’ ಎಂದರು. ಸಾಕ್ರೆಟಿಸರು ‘ನಿಮಗೆ ನಾನು ಉಪದೇಶ ಕೊಡುವುದಿಲ್ಲ. ಅದರ ಬದಲು ಈ ಭೂಪಟವನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ. ಮುಂದೆಂದಾದರೂ ನಿಮಗೆ ನಿಮ್ಮ ಸಿರಿವಂತಿಕೆಯ ಬಗ್ಗೆ ನಿಮ್ಮ ಅರಮನೆಯಂಥ ಮನೆ ಬಗ್ಗೆ, ನೂರಾರು ಎಕರೆ ಜಮೀನಿನ ಬಗ್ಗೆ ಅಹಂಕಾರ ಎನಿಸಿದರೆ, ಆಗ ನೀವು ಈ ಭೂಪಟವನ್ನು ಕೈಗೆತ್ತಿಕೊಂಡು ನಿಮ್ಮ ಸಿರಿವಂತಿಕೆಯನ್ನು ಇದರಲ್ಲಿ ಹುಡುಕಿ. ಆಗ ನೀವ್ಯಾರು? ಎಷ್ಟು ದೊಡ್ಡವರೆಂಬುದು ಅರ್ಥವಾಗುತ್ತದೆ. ನೀವು ಸಣ್ಣದೊಂದು ಚುಕ್ಕೆಯೊಳಗಿನ ಅತೀ ಸಣ್ಣ ಚುಕ್ಕೆಯೆಂಬುದು ಅರಿವಾಗುತ್ತದೆ’ ಎಂದು ಹೇಳಿದರಂತೆ.

ಶ್ರೀಮಂತರು ಸಾಕ್ರೆಟಿಸರಿಗೆ ಧನ್ಯವಾದಗಳನ್ನು ಅರ್ಪಿಸಿ ಹೊರಟು ಹೋದರಂತೆ. ನಮಗೂ ಯಾವಾಗಲಾದರೂ ನಾವು ಬಹಳ ದೊಡ್ಡವರೆಂಬ ಭಾವನೆ ಬಂದಾಗ ನಾವೂ ಒಂದು ಗ್ಲೋಬ್ ತೆಗೆದುಕೊಂಡು ನಮ್ಮ ದೊಡ್ಡಸ್ತಿಕೆಯನ್ನು ಅದರಲ್ಲಿ ಹುಡುಕಬಹುದು. ನಾವೂ ಸಣ್ಣ ಚುಕ್ಕೆಯೊಳಗಿನ ಅತೀ ಸಣ್ಣ ಚುಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.                           
ಕೃಪೆ: ಭೀಮು ಕಂಬಾರ.e-books 19 .                  ವೀರೇಶ್ ಅರಸಿಕೆರೆ.ದಾವಣಗೆರೆ.

Monday, 22 January 2018



ದಿನಕ್ಕೊಂದು ಕತೆ

*🌻ದಿನಕ್ಕೊಂದು ಕಥೆ🌻                                      *ಯಾರು ಯಾರು ನೀಯಾರು? ಎಲ್ಲಿಂದ ಬಂದೆ ಯಾವೂರು?*

ನಾವೆಲ್ಲಾ ಹಳೆಯ ಕನ್ನಡ ಸಿನಿಮಾ ರತ್ನಮಂಜರಿಯ(1962) ಈ ಹಾಡನ್ನು ಕೇಳಿದ್ದೇವಲ್ಲವೇ? ಮೊದಲ ಬಾರಿ ನೋಡಿದಾಗ, ಕೇಳಿದಾಗ ಹೆದರಿಕೊಂಡಿದ್ದರೂ ಆಶ್ಚರ್ಯವೇನಿಲ್ಲ! (ಹಾಡಿನಲ್ಲಿ ರುಂಡವೊಂದು ಕಡೆ, ಮುಂಡವೊಂದು ಕಡೆ ಇರುವ ಯುವತಿಯ ನೆನಪಾಯಿತೇ?) ಆಕಾಲದ ಜನಪ್ರಿಯ ಹಾಸ್ಯನಟರಾದ ನರಸಿಂಹರಾಜು ಮತ್ತು ಎಂ.ಎನ್.ಲಕ್ಷ್ಮೀದೇವಿಯವರ ಅಭಿನ ಯದ ಹಾಡು. ಈಗ ಆ ಹಾಡಿನ ನೆನಪಾಗಲು ಕಾರಣವೇನೆಂದರೆ ದೆವ್ವವೊಂದರ ಉಲ್ಲೇಖವಿರುವ ಪ್ರಸಂಗವೊಂದು ಇಲ್ಲಿದೆ.

ಆದರೆ ಹೆದರಬೇಕಿಲ್ಲ. ಏಕೆಂದರೆ ಪ್ರಸಂಗದಲ್ಲೇ ದೆವ್ವಗಳು ಬರುವುದು ಎಲ್ಲಿಂದ ಎಂಬ ಸಮಾಧಾನಕರ ಉತ್ತರವೂ ಇದೆ. ಯುವ ದಂಪತಿಗೆ ಆಗಷ್ಟೇ ಮದುವೆಯಾಗಿತ್ತು. ಇಬ್ಬರೂ ಪರಸ್ಪರರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಸಂಸಾರ. ಆದರೆ ದುರದೃಷ್ಟದಿಂದ ಆಕೆಗೆ ತೀವ್ರವಾದ ಅನಾರೋಗ್ಯವುಂಟಾಯಿತು. ಏನೆಲ್ಲಾ ಚಿಕಿತ್ಸೆ ಕೊಡಿಸಿದರೂ ಪತ್ನಿ ಉಳಿಯಲಿಲ್ಲ. ಪತ್ನಿ ಸಾಯುವ ಮುಂಚೆ ‘ನಮ್ಮಿಬ್ಬರದ್ದು ಅಮರ ಮಧುರ ಪ್ರೇಮ! ನಾನು ಸತ್ತರೂ ನಮ್ಮಿಬ್ಬರ ಪ್ರೇಮ ಸಾಯಬಾರದು. ನೀವು ಮರುಮದುವೆಯಾಗಲು ಪ್ರಯತ್ನಿಸಿದರೆ ನಾನು ದೆವ್ವವಾಗಿ ಬಂದು ನಿಮ್ಮನ್ನು ಕಾಡುತ್ತೇನೆ’ ಎಂದು ಹೇಳಿ ಪ್ರಾಣಬಿಟ್ಟಳು.

ಆನಂತರ ಯುವಕ ಕೆಲವು ವರ್ಷ ಒಂಟಿಯಾಗಿದ್ದರು. ಕೊನೆಗೆ ಒಂಟಿ ಜೀವನ ಕಷ್ಟವೆನಿಸಿತು. ಮರುಮದುವೆಯಾಗಲು ನಿರ್ಧರಿಸಿದರು. ಬೇರೊಬ್ಬಳೊಂದಿಗೆ ನಿಶ್ಚಿತಾರ್ಥವೂ ಆಯಿತು. ಅಂದು ರಾತ್ರಿಯೇ ಮೃತಪತ್ನಿಯ ದೆವ್ವ ಕಂಡಂತಾಯಿತು. ಆಕೆ ತಾವಿಬ್ಬರೂ ಜತೆಯಲ್ಲಿ ಕಳೆದ ದಿನಗಳನ್ನೂ, ಏಕಾಂತದಲ್ಲಿ ಆಡಿದ್ದ ಮಾತುಗಳನ್ನೂ ವಿವರವಾಗಿ ನೆನಪಿಸಿದರು. ಮದುವೆ ಬೇಡವೆಂದು ಬೆದರಿಸಿದರು. ಯುವಕ ಗಾಬರಿಯಾಗಿ ಎದ್ದು ಕುಳಿತರು. ತಮ್ಮಿಬ್ಬರಿಗೆ ಮಾತ್ರ ಗೊತ್ತಿದ್ದ ಅನೇಕ ವಿಷಯಗಳನ್ನೆಲ್ಲ ದೆವ್ವ ಸವಿವರವಾಗಿ ಹೇಳುತ್ತಿದ್ದುದರಿಂದ ಅದನ್ನು ನಂಬಲೇಬೇಕಿತ್ತು. ಮತ್ತೆ ಯುವಕ ಮಲಗಲಿಲ್ಲ. ಮುಂಜಾನೆಯೇ ಮನೋವೈದ್ಯರೊಬ್ಬರ ಬಳಿ ಹೋಗಿ ತನ್ನ ಗೋಳನ್ನು ಹೇಳಿಕೊಂಡರು.

ವೈದ್ಯರು ‘ಇದು ಪರಿಹರಿಸಬಹುದಾದ ಸಮಸ್ಯೆ. ಮೃತಪತ್ನಿಯ ದೆವ್ವ ಬುದ್ಧಿಶಾಲಿಯಂತಿದೆ. ಅದಕ್ಕೆ ಎಲ್ಲ ಗೊತ್ತಿರುವಂತಿದೆ. ನಾನು ನಿನಗೆ ಸೀಲ್ ಮಾಡಿದ ಡಬ್ಬವೊಂದನ್ನು ಕೊಡುತ್ತೇನೆ. ಇಂದು ರಾತ್ರಿ ಆ ದೆವ್ವ ಬಂದರೆ ಅದಕ್ಕೆ ಡಬ್ಬದೊಳಗೆ ಏನಿದೆಯೆಂದು ಹೇಳಿದರೆ ನಿಶ್ಚಿತಾರ್ಥವನ್ನು ಮುರಿದು ಹಾಕುತ್ತೇನೆಂದೂ, ಮರುಮದುವೆ ಆಗುವುದಿಲ್ಲವೆಂದೂ ಹೇಳು. ಒಂದು ವಾರದ ನಂತರ ಬಂದು ನನ್ನನ್ನು ಭೇಟಿಯಾಗು’ ಎಂದರು. ಯುವಕ ಸೀಲ್ ಮಾಡಿದ ಡಬ್ಬದೊಂದಿಗೆ ಮನೆಗೆ ಬಂದರು. ದೆವ್ವಕ್ಕಾಗಿ ಅವರೇ ಕಾದು ಕುಳಿತರು. ಮಧ್ಯರಾತ್ರಿ ದೆವ್ವ ಬಂದಂತಾಯಿತು. ಅದು ಮತ್ತೆ ಸವಿಸವಿ ಮಾತುಗಳನ್ನಾಡಿತು. ಬೇರೆ ಮದುವೆಯಾಗಬೇಡವೆಂದು ಬೆದರಿಸಿತು. ಆಗ ಯುವಕ ಡಬ್ಬವನ್ನು ಹೊರತೆಗೆದರು. ಇದರಲ್ಲೇನಿದೆಯೆಂದು ಸರಿಯಾಗಿ ಹೇಳಿದರೆ ನಿಶ್ಚಿತಾರ್ಥ ಮುರಿಯುತ್ತೇನೆಂದು ವಾಗ್ದಾನ ಮಾಡಿದರು.

ದೆವ್ವ ಬಹಳ ಹೊತ್ತು ಡಬ್ಬವನ್ನೇ ದೃಷ್ಟಿಸಿ ನೋಡಿತು. ನಿಟ್ಟುಸಿರು ಬಿಟ್ಟು ನಾಳೆ ಬಂದು ಹೇಳುತ್ತೇನೆಂದು ಹೇಳಿ ಹೋಯಿತು. ನಾಳೆಯೇಕೆ? ಒಂದು ವಾರ ಕಾದರೂ ಬರಲಿಲ್ಲ. ಯುವಕ ಸಂತೋಷದಿಂದ ವೈದ್ಯರ ಬಳಿ ಹೋಗಿ ದೆವ್ವದ ಕಾಟ ತಪ್ಪಿಸಿದ್ದಕ್ಕೆ ವೈದ್ಯರಿಗೆ ಧನ್ಯವಾದ ತಿಳಿಸಿ ನಿಗದಿಗೊಳಿಸಿದ್ದ ಫೀಸ್ ಕೊಟ್ಟರು. ಬರುವಾಗ ಡಬ್ಬದಲ್ಲಿ ಏನಿದೆಯೆಂದು ವೈದ್ಯರನ್ನು ಕೇಳಿದರು. ವೈದ್ಯರು ಡಬ್ಬದಲ್ಲಿ ಏನಿದೆಯೆಂದು ನಿನಗೆ ಗೊತ್ತಾದರೆ ದೆವ್ವ ಮತ್ತೆ ಬರುತ್ತದೆ. ಏಕೆಂದರೆ ಆ ದೆವ್ವ ನಿನ್ನದೇ ಕಲ್ಪನೆ! ನಿನ್ನ ಪಾಪಪ್ರಜ್ಞೆ ನಿನ್ನನ್ನು ಕಾಡುತ್ತಿತ್ತು. ಅದೇ ದೆವ್ವದ ಸೃಷ್ಟಿ ಮಾಡಿತು. ನಿನಗೆ ಗೊತ್ತಿರುವ ವಿಷಯಗಳು ಮಾತ್ರ ದೆವ್ವಕ್ಕೆ ಗೊತ್ತಿತ್ತು. ನಿನಗೆ ಗೊತ್ತಿಲ್ಲದ ವಿಷಯ ದೆವ್ವಕ್ಕೂ ಗೊತ್ತಾಗುವುದಿಲ್ಲ! ಎಂದು ಹೇಳಿ ಕಳುಹಿಸಿದರು. ಮುಂದೇನಾಯಿತೆಂಬ ಗೊಂದಲ ನಮಗೇಕೆ? ದೆವ್ವಗಳು ಎಲ್ಲಿಂದ ಬರುತ್ತವೆಂದು ನಮಗೆ ಗೊತ್ತಾಗಿದೆಯಲ್ಲವೇ? ನಮ್ಮ ಮನಸ್ಸಿನ ಸೃಷ್ಟಿಯೇ ಆದ ಅವಕ್ಕೆ ನಾವು ಹೆದರಬಾರದಲ್ಲವೇ?

ಕೃಪೆ:ಎಸ್.ಷಡಕ್ಷರಿ. ವೀರೇಶ್ ಅರಸೀಕೆರೆ
ಸಂಪಾದನೆ ರಾಜು ಅವಳೇಕರ

Sunday, 21 January 2018

ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ರಂಜಾನ್ ಬಂತು, ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು. ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು. ಕ್ರಿಸ್'ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು. 

ಒಂದು ದಿನ ಮಸೀದಿ ಮುಂದೆ ಕೋಮುಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳ ತಾಯಿ ಪರಿವಾಳವನ್ನು ಕೇಳಿತು.... 
'ಯಾರು ಅವರು ಬಡಿದುಕೊಳ್ಳುತ್ತಿರುವುದು'.
ತಾಯಿ ಪಾರಿವಾಳ ಹೇಳಿತು...
'ಅವರು ಮನುಷ್ಯರು' ಮಗು.
ಯಾಕೆ ಅವರು ಜಗಳವಾಡುತ್ತಿದ್ದಾರೆ...
'ಮಸೀದಿಗೆ ಹೋಗುವವರು ಮುಸ್ಲಿಮರು'
'ಗುಡಿಗೆ ಹೋಗುವವರು ಹಿಂದುಗಳು'
'ಚರ್ಚ್'ಗೆ ಹೋಗುವವರು ಕ್ರೈಸ್ತರು'
ಇದು ಹಿಂದು ಮುಸ್ಲಿಮರ ಘರ್ಷಣೆ.

ಮರಿ ಪಾರಿವಾಳಕ್ಕೆ ಆಚ್ಚರ್ಯವಾಯಿತು.
'ನಾವು ಕೂಡ ಮಸೀದಿಗೆ, ಗುಡಿಗೆ, ಚರ್ಚ್'ಗೆ ತಿರುಗಿದ್ದೆವು ಅಲ್ಲವೇ...! 
ನಾವು ಎಲ್ಲಿಗೆ ಹೋದರೂ ಪಾರಿವಾಳಗಳೇ.
ಮತ್ತೆ ಅವರು ಮನುಷ್ಯರು ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ...!

ತಾಯಿ ಪಾರಿವಾಳ ನಕ್ಕಿತು....
"ನಾವು ಅವರಿಗಿಂತ ಎತ್ತರದಲ್ಲಿದ್ದೆವೆ. ವಿಶಾಲವಾದ ಪ್ರಪಂಚ ನಮ್ಮದು. ಸ್ವೇಚ್ಛಾ ಜಗತ್ತು ನಮ್ಮದು. ಎಲ್ಲಾ ಜೀವಿಗಳಲ್ಲಿ ಮೇಧಾವಿಯಾದ ಮಾನವ ಕುಲ, ಮತ, ಜಾತಿ, ಲಿಂಗ, ವರ್ಗ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾನೆ. ಎಲ್ಲವನ್ನೂ ಬಿಟ್ಟರೆ ಮಾತ್ರ ಅವರು ನಮ್ಮ 'ಎತ್ತರ'ಕ್ಕೆ ಬರುತ್ತಾರೆ.
ಈ ಘರ್ಷಣೆಗಳು ಅಂತ್ಯವಾಗುತ್ತವೆ". ಎನ್ನುತ್ತಾ ಪೂರ್ವದಿಕ್ಕಿನಲ್ಲಿ ವಿಹಂಗಮವಾಗಿ ಹಾರುತ್ತಿರುವ ಮತ್ತೊಂದು ಪಾರಿವಾಳದ ಗುಂಪನ್ನು ನೋಡುತ್ತಾ ಹೇಳಿತು.

( ಕಥೆ ಬರೆದವರು ಗೊತ್ತಿಲ್ಲ. But i Salute him)
🌻ದಿನಕ್ಕೊಂದು ಕಗ್ಗ🌻

ಅಣು ಭೂತ ಭೂಗೋಳ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ||
ಳಣಗಿರ್ದು ಪರಬೊಮ್ಮ - ಮಂಕುತಿಮ್ಮ

ಸಾರಾಂಶ:

ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ತಿಕಂತುಕವನದರೊಳಣಗಿರ್ದು = ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.

ಆ ಪರಬ್ರಹ್ಮ ಈ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿ ಸ್ವಲ್ಪ ಸಡಿಲ ಬಿಟ್ಟು, ತನ್ನ ಕೃತಿಯಾದ ಈ ಜಗತ್ತನ್ನು ಒಂದು ಚೆಂಡು ಎಂದು ಭಾವಿಸಿ, ತಾನೂ ಅದರೋಗೆ ಸೇರಿ ಒಂದು ಸೂತ್ರದಾಟವ ಆಡುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

ಒಂದು ಬೃಹತ್ ಜಗತ್ತನ್ನು ತನ್ನ ಸಂಕಲ್ಪದಿಂದಲೇ ಸೃಷ್ಟಿಮಾಡಿ , ಎಲ್ಲದರೊಳಗೂ ಚೇತನಾ ಸ್ವರೂಪವಾಗಿ ತಾನೇ ಸೇರಿಕೊಂಡು ಎಲ್ಲವನ್ನೂ ಒಂದು ಸೂತ್ರದಲ್ಲಿ ಬಂಧಿಸಿದ್ದಾನೆ ಆ ಪರಮಾತ್ಮ ಎನ್ನುವುದೇ ಈ ಕಗ್ಗದ ಹೂರಣ. ನೋಡಿ ನಮ್ಮಲ್ಲಿ ಒಂದು ಆಟಿಗೆ ಸಿಗುತ್ತಗೆ. ಒಂದು ರಬ್ಬರ್ ಚೆಂಡು, ಆ ಚೆಂಡಿನ ತುದಿಗೆ ಒಂದು ರಬ್ಬರ್ ದಾರ. ಆ ದಾರವನ್ನು ಕೈಗೆ ಸಿಕ್ಕಿಸಿಕೊಂಡು ಆ ಚೆಂಡನ್ನು ದೂರ ಎಸೆದಂಗೆ ಮಾಡಿದರೆ, ಅದು ಆ ದಾರ ಎಷ್ಟು ದೂರ ಸಾಗಿ ಹೋಗಬಹುದೋ ಅಷ್ಟು ದೂರ ಹೋಗಿ ಮತ್ತೆ ತನ್ನ ಸ್ವಸ್ಥಾನವನ್ನು ಸೇರುತ್ತದೆ. ಆ ಮಕ್ಕಳ ಆಟ ಹಾಗೆ ಸಾಗಿರುತ್ತದೆ. ಹಾಗೆಯೇ ಈ ಜಗತ್ತನ್ನು ಒಂದು ಕಂದುಕ ಅಂದರೆ ಚೆಂಡಿನಂತೆ ಸೃಷ್ಟಿಮಾಡಿ ಅದಕ್ಕೆ ಚೇತನವೆಂಬ ಸೂತ್ರದಿಂದ ಎಲ್ಲವನ್ನೂ ಬಂಧಿಸಿ ತನ್ನ ಲೀಲಾವಿನೋದದಲ್ಲಿ, ಮಕ್ಕಳು ಚೆಂಡಾಡುವಂತೆ ಆಡುತ್ತಿದ್ದಾನೆ ಆ ಪರಮಾತ್ಮ.

ನಿಜವಿರಬಹುದು. ಏಕೆಂದರೆ ನಮಗೆ ನಮ್ಮ ನಮ್ಮ ಬದುಕಿನಲ್ಲಿ ನಡೆಯುವ ಮತ್ತು ಆಗುವ ವಿಧ್ಯಮಾನಗಳಿಗೆ ತಾರ್ಕಿಕ ವಿವರಣೆಯನ್ನು ನೀಡಲು ನಾವು ಎಷ್ಟು ಸಮರ್ಥರೋ ಎಂದು ಯೋಚಿಸಿದಾಗ ಯಾವುದೂ ಒಂದು ಶಕ್ತಿ ನಮ್ಮ ಎಲ್ಲ ಗತಿ ವಿಧಿಯನ್ನು ನಿಯಂತ್ರಿಸುತ್ತಿದೆ ಎಂದು ಸಾಮಾನ್ಯವಾಗಿ ಅನ್ನಿಸುತ್ತದೆ. ಆದರೆ ಸ್ವಲ್ಪ ಸಡಿಲವನ್ನೂ ಬಿಟ್ಟಿದ್ದಾನೆ, ಎಂದರೆ ಎಲ್ಲ ಪ್ರಾಣಿಗಳಿಗೂ ಸ್ವಲ್ಪ ಸ್ವಾತಂತ್ರ್ಯವನ್ನೂ ನೀಡಿದ್ದಾನೆ ಎಂದು ಅರ್ಥೈಸಬಹುದು. ಆ ಸ್ವಲ್ಪ ಸ್ವಾತಂತ್ರ್ಯವನ್ನು ತನ್ನ ಬುದ್ಧಿಶಕ್ತಿಯಿಂದ ನಾವು ನಮ್ಮನ್ನು ಸನ್ಮಾರ್ಗದಲ್ಲಿ, ಸಂತ ಸಂಗದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರೆ, ಅವನ ಸದ್ನಿಯಂತ್ರಣ ಮತ್ತು ನಮ್ಮ ಸದ್ಪ್ರಯತ್ನ ಎರಡರಿಂದ ನಮ್ಮ ಬಾಳೂ ಸ್ವಲ್ಪ ಹಸನಾಗಬಹುದು. ನಮ್ಮನ್ನು ನಾವು ಆ ಪರಮಾತ್ಮನ ಸೂತ್ರದ ಅಂಕೆಯೊಳಕ್ಕೆ ತೊಡಗಿಸಿಕೊಂಡು ಬಿಟ್ಟರೆ ನಮಗೆ ನಿಶ್ಚಿಂತೆ. ಅದು ಬಿಟ್ಟು ನಾವು ಸ್ವತಂತ್ರರು ಅವನು ಸೃಷ್ಟಿಮಾಡಿದಮೇಲೆ, ನಾವು ನಮ್ಮ ಬದುಕನ್ನು ಬದುಕುತ್ತೇವೆ, ಅದರಲ್ಲಿ ಅವನ ಪ್ರಮೆಯವೇನೂ ಇಲ್ಲವೆನ್ನುವವರೂ ಇದ್ದಾರೆ. ಇರಲಿ ಅವರಿಗದು ಪ್ರಿಯ. ನಮಗೇನು ಬೇಕೋ ಅದನ್ನು ಆಯ್ವ ಸ್ವಾತಂತ್ರ್ಯ ನಮಗಿದೆ. ನಮಗಾಗುವ ಪರಿಣಾಮ ನಮ್ಮ ಆಯ್ಕೆ ಮೇಲೆ ಅಧಾರಪಟ್ಟಿರುತ್ತದೆ.

ವಾಚಕರೆ ನಮಗೇನು ಬೇಕೋ ಅದನ್ನು ಆಯ್ದು ಅದರಿಂದ ಬಂದ ಸಾಧಕ ಬಾಧಕಗಳನ್ನು ನಾವು ಅನುಭವಿಸುತ್ತಾ ಅಥವಾ ಆನಂದಿಸುತ್ತಾ ಇರಬಹುದು.


ಸ್ಫೂರ್ತಿ - ಸಿರಿಗನ್ನಡ ನುಡಿ ಬಳಗ

ದಿನಕ್ಕೊಂದು ಕಥೆ

  *ನಾನೊಂದು ಚುಕ್ಕೆ! ನೀನೊಂದು ಚುಕ್ಕೆ......* ನಮ್ಮನ್ನು ಚುಕ್ಕೆ ಎಂದು ಕರೆಯುವ ಧೈರ್ಯ ಯಾರಿಗಿದೆ? ಆದರೆ ನೀವೊಂದು ಚುಕ್ಕೆಯೊಳಗಿನ ಚುಕ್ಕೆ ಎಂದು ಧೈರ್ಯವಾಗಿ ಹೇಳಿ...