Sunday, 21 January 2018

🌻ದಿನಕ್ಕೊಂದು ಕಗ್ಗ🌻

ಅಣು ಭೂತ ಭೂಗೋಳ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ||
ಳಣಗಿರ್ದು ಪರಬೊಮ್ಮ - ಮಂಕುತಿಮ್ಮ

ಸಾರಾಂಶ:

ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ತಿಕಂತುಕವನದರೊಳಣಗಿರ್ದು = ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.

ಆ ಪರಬ್ರಹ್ಮ ಈ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿ ಸ್ವಲ್ಪ ಸಡಿಲ ಬಿಟ್ಟು, ತನ್ನ ಕೃತಿಯಾದ ಈ ಜಗತ್ತನ್ನು ಒಂದು ಚೆಂಡು ಎಂದು ಭಾವಿಸಿ, ತಾನೂ ಅದರೋಗೆ ಸೇರಿ ಒಂದು ಸೂತ್ರದಾಟವ ಆಡುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

ಒಂದು ಬೃಹತ್ ಜಗತ್ತನ್ನು ತನ್ನ ಸಂಕಲ್ಪದಿಂದಲೇ ಸೃಷ್ಟಿಮಾಡಿ , ಎಲ್ಲದರೊಳಗೂ ಚೇತನಾ ಸ್ವರೂಪವಾಗಿ ತಾನೇ ಸೇರಿಕೊಂಡು ಎಲ್ಲವನ್ನೂ ಒಂದು ಸೂತ್ರದಲ್ಲಿ ಬಂಧಿಸಿದ್ದಾನೆ ಆ ಪರಮಾತ್ಮ ಎನ್ನುವುದೇ ಈ ಕಗ್ಗದ ಹೂರಣ. ನೋಡಿ ನಮ್ಮಲ್ಲಿ ಒಂದು ಆಟಿಗೆ ಸಿಗುತ್ತಗೆ. ಒಂದು ರಬ್ಬರ್ ಚೆಂಡು, ಆ ಚೆಂಡಿನ ತುದಿಗೆ ಒಂದು ರಬ್ಬರ್ ದಾರ. ಆ ದಾರವನ್ನು ಕೈಗೆ ಸಿಕ್ಕಿಸಿಕೊಂಡು ಆ ಚೆಂಡನ್ನು ದೂರ ಎಸೆದಂಗೆ ಮಾಡಿದರೆ, ಅದು ಆ ದಾರ ಎಷ್ಟು ದೂರ ಸಾಗಿ ಹೋಗಬಹುದೋ ಅಷ್ಟು ದೂರ ಹೋಗಿ ಮತ್ತೆ ತನ್ನ ಸ್ವಸ್ಥಾನವನ್ನು ಸೇರುತ್ತದೆ. ಆ ಮಕ್ಕಳ ಆಟ ಹಾಗೆ ಸಾಗಿರುತ್ತದೆ. ಹಾಗೆಯೇ ಈ ಜಗತ್ತನ್ನು ಒಂದು ಕಂದುಕ ಅಂದರೆ ಚೆಂಡಿನಂತೆ ಸೃಷ್ಟಿಮಾಡಿ ಅದಕ್ಕೆ ಚೇತನವೆಂಬ ಸೂತ್ರದಿಂದ ಎಲ್ಲವನ್ನೂ ಬಂಧಿಸಿ ತನ್ನ ಲೀಲಾವಿನೋದದಲ್ಲಿ, ಮಕ್ಕಳು ಚೆಂಡಾಡುವಂತೆ ಆಡುತ್ತಿದ್ದಾನೆ ಆ ಪರಮಾತ್ಮ.

ನಿಜವಿರಬಹುದು. ಏಕೆಂದರೆ ನಮಗೆ ನಮ್ಮ ನಮ್ಮ ಬದುಕಿನಲ್ಲಿ ನಡೆಯುವ ಮತ್ತು ಆಗುವ ವಿಧ್ಯಮಾನಗಳಿಗೆ ತಾರ್ಕಿಕ ವಿವರಣೆಯನ್ನು ನೀಡಲು ನಾವು ಎಷ್ಟು ಸಮರ್ಥರೋ ಎಂದು ಯೋಚಿಸಿದಾಗ ಯಾವುದೂ ಒಂದು ಶಕ್ತಿ ನಮ್ಮ ಎಲ್ಲ ಗತಿ ವಿಧಿಯನ್ನು ನಿಯಂತ್ರಿಸುತ್ತಿದೆ ಎಂದು ಸಾಮಾನ್ಯವಾಗಿ ಅನ್ನಿಸುತ್ತದೆ. ಆದರೆ ಸ್ವಲ್ಪ ಸಡಿಲವನ್ನೂ ಬಿಟ್ಟಿದ್ದಾನೆ, ಎಂದರೆ ಎಲ್ಲ ಪ್ರಾಣಿಗಳಿಗೂ ಸ್ವಲ್ಪ ಸ್ವಾತಂತ್ರ್ಯವನ್ನೂ ನೀಡಿದ್ದಾನೆ ಎಂದು ಅರ್ಥೈಸಬಹುದು. ಆ ಸ್ವಲ್ಪ ಸ್ವಾತಂತ್ರ್ಯವನ್ನು ತನ್ನ ಬುದ್ಧಿಶಕ್ತಿಯಿಂದ ನಾವು ನಮ್ಮನ್ನು ಸನ್ಮಾರ್ಗದಲ್ಲಿ, ಸಂತ ಸಂಗದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರೆ, ಅವನ ಸದ್ನಿಯಂತ್ರಣ ಮತ್ತು ನಮ್ಮ ಸದ್ಪ್ರಯತ್ನ ಎರಡರಿಂದ ನಮ್ಮ ಬಾಳೂ ಸ್ವಲ್ಪ ಹಸನಾಗಬಹುದು. ನಮ್ಮನ್ನು ನಾವು ಆ ಪರಮಾತ್ಮನ ಸೂತ್ರದ ಅಂಕೆಯೊಳಕ್ಕೆ ತೊಡಗಿಸಿಕೊಂಡು ಬಿಟ್ಟರೆ ನಮಗೆ ನಿಶ್ಚಿಂತೆ. ಅದು ಬಿಟ್ಟು ನಾವು ಸ್ವತಂತ್ರರು ಅವನು ಸೃಷ್ಟಿಮಾಡಿದಮೇಲೆ, ನಾವು ನಮ್ಮ ಬದುಕನ್ನು ಬದುಕುತ್ತೇವೆ, ಅದರಲ್ಲಿ ಅವನ ಪ್ರಮೆಯವೇನೂ ಇಲ್ಲವೆನ್ನುವವರೂ ಇದ್ದಾರೆ. ಇರಲಿ ಅವರಿಗದು ಪ್ರಿಯ. ನಮಗೇನು ಬೇಕೋ ಅದನ್ನು ಆಯ್ವ ಸ್ವಾತಂತ್ರ್ಯ ನಮಗಿದೆ. ನಮಗಾಗುವ ಪರಿಣಾಮ ನಮ್ಮ ಆಯ್ಕೆ ಮೇಲೆ ಅಧಾರಪಟ್ಟಿರುತ್ತದೆ.

ವಾಚಕರೆ ನಮಗೇನು ಬೇಕೋ ಅದನ್ನು ಆಯ್ದು ಅದರಿಂದ ಬಂದ ಸಾಧಕ ಬಾಧಕಗಳನ್ನು ನಾವು ಅನುಭವಿಸುತ್ತಾ ಅಥವಾ ಆನಂದಿಸುತ್ತಾ ಇರಬಹುದು.


ಸ್ಫೂರ್ತಿ - ಸಿರಿಗನ್ನಡ ನುಡಿ ಬಳಗ

No comments:

Post a Comment

ದಿನಕ್ಕೊಂದು ಕಥೆ

  *ನಾನೊಂದು ಚುಕ್ಕೆ! ನೀನೊಂದು ಚುಕ್ಕೆ......* ನಮ್ಮನ್ನು ಚುಕ್ಕೆ ಎಂದು ಕರೆಯುವ ಧೈರ್ಯ ಯಾರಿಗಿದೆ? ಆದರೆ ನೀವೊಂದು ಚುಕ್ಕೆಯೊಳಗಿನ ಚುಕ್ಕೆ ಎಂದು ಧೈರ್ಯವಾಗಿ ಹೇಳಿ...